ಕವಿತೆ - ಗಾಂಧಿ!!!
ಗಾಂಧಿ!!*
ಓ.. ಮಹಾತ್ಮನೇ
ಹುಟ್ಟಿ ಬರಬೇಡ, ಮತ್ತೆಂದೂ
ಎದೆ ಒಡೆದೀತು, ದೇಶ ಕಂಡು!
ಜಗದ ಹೃದಯ ಗೆದ್ದ
ಎದೆಗಾರನೆ!
ಮನೆ-ಮನಕೆ ಕನಸು ಮಾರುವ
ಕನಸುಗಾರನೆ!
ಒಣಕಟ್ಟಿಗೆಯಲೂ ರೋಷವನುಕ್ಕಿಸುವ
ಹೋರಾಟಗಾರನೇ!
ಗುಂಡು ಹಾರಿಸುವ ಸ್ವಾತಂತ್ರ್ಯವ
ಕೊಟ್ಟು ಹೋದವನೇ!
ಹುಟ್ಟಿ ಬರಬೇಡ, ಮತ್ತೆಂದೂ
ಎದೆ ಒಡೆದೀತು, ದೇಶ ಕಂಡು!
ಜೀವವಿಲ್ಲದ
ಕಲ್ಲು-ಕಟ್ಟಿಗೆ ತುಂಡುಗಳೂ
ಎದೆಯುಬ್ಬಿಸಿ ಹಾಡುತಿವೆ
ದ್ವೇಷ-ಅಸೂಯೆಯ ಲಾಲಿಯನು!
ಕಣಕಣದಲೂ ವಿಷದ ಹೊಗೆ
ಸುತ್ತಿ ಸುಳಿದು, ಮತ್ತೇರಿಸಿ,
ಬೀಗುತಿದೆ ಒಣಜಂಭದಿ
ರಾಜ್ಯವಿಲ್ಲದ ಆಸ್ಥಾನದಲಿ!.
ನಿನ್ನ ಕನಸಿನ ನಾಡ ತುಂಬೆಲ್ಲಾ
ಜಿನುಗುತಿದೆ ಕೊಳೆಯ ಹೊಳೆ!
ಅಂತರಂಗದಿ ಕಸದ ರಾಶಿ!
ಮನೆ-ಮನೆಯ ಅಂಗಳದಲಿ
ಬಿರುಕು ಗೋಡೆಗಳು!
ಅಂಗೈ ಗೆರೆಗಳ ತುಂಬಾ
ರಕ್ತವಾಸನೆ!
ಹೆಂಗಳೆಯರ ಬದುಕು
ನಿತ್ಯ ನಾಯನರಕ!
ಬಂದೂಕಿನ ಸದ್ದು
ಸತ್ಯ ಸುಪ್ರಭಾತ!.
ನೀ ಕೊಟ್ಟು ಹೋದ ತತ್ವಾದರ್ಶಗಳೆಲ್ಲ
ಭದ್ರವಾಗಿ ಕೀಲಿಹಾಕಿದ
ತಿಜೋರಿ, ಕಪಾಟಿನ
ಕಮಟು ಮೂಲೆಗಳಲಿ
ನಿದ್ರಿಸುತ್ತಿವೆ, ಬಹುಕಾಲದಿಂದ!
ನೀ ಖಂಡಿಸಿದ ಹೊಲಸು ಬೇರುಗಳು
ಸದ್ದುಗದ್ದಲದಿ ಗದ್ದುಗೆ ಏರಿ,
ಹೂ ಬಿಡಿಸಿ, ಕಾಯಿ, ಹಣ್ಣಾಗಿಸಿ
ನಗುತ್ತಿವೆ, ಮೀಸೆಯ ಮರೆಯಲ್ಲಿ!
ಮೆರೆಯುತಿವೆ ಅಧಿಪತಿಯಾಗಿ!
ಕತ್ತಲ ಸಾಮ್ರಾಜ್ಯದಲಿ!
ನಿನ್ನ ಹೃದಯದ ಮನೆಯೀಗ
ಹಾಳುಬಿದ್ದ ಹಂದರ;
ನೋಡಿ ನಗುತಿಹನು ಚಂದಿರ!
ಸಂಶಯದ ನೆರಳೇ ಎಲ್ಲೆಲ್ಲೂ!
ಕಿಡಿಮಾತುಗಳೇ ಎಡಬಲದಲ್ಲಿ ಘೋಷವಾಕ್ಯ!
ಬದುಕೆಂಬುದೇ ಹಗ್ಗದ ಮೇಲಿನ ನಡಿಗೆ
ತೂತು ಬಿದ್ದ ಹಲಗೆ!
ಉಳ್ಳವರ ಕಾರುಬಾರು! ಮೋಹ-ದಾಹಕೆ
ನಾಡ ನಡು ಬಾಗಿದೆ;
ಬಿದ್ದವರ ಕೀರಲು ದನಿ
ಹೊರಬರದೇ ಬಡವಾಗಿದೆ,
ಆರ್ಭಟದ ಧ್ವನಿಗಳ ಮುಂದೆ!.
ನೋವು ಸಂಕಟದ ಕಣ್ಣೀರು
ಬೆಂದು ಒಂದಾಗಿವೆ ಮಳೆನೀರಲಿ!.
ಹುಟ್ಟಿ ಬರಬೇಡ ಮತ್ತೆಂದೂ
ಎದೆ ಒಡೆದೀತು, ದೇಶ ಕಂಡು!
ಬರುವುದಾದರೆ...
ಸಾವಿರದ, ನೋವಿಡದ, ಕೈಬಿಡದ
ಚಿರಂಜೀವಿಯಾಗಿ ಬಾ...
ನಿನ್ನ ಸಂತತಿಯನೇ ಹೊತ್ತು ಬಾ..
ಇಲ್ಲವಾದರೆ,
ಕನಸಾಗಿಯೇ ಉಳಿದುಬಿಡು!
ನಿನ್ನ ನೆನಪಲ್ಲಾದರೂ
ದೇಶ ಸಂಭ್ರಮಿಸೀತು!.
ಎಂ.ಡಿ.ಚಿತ್ತರಗಿ
ಹುನಗುಂದ
9686019177