ಸೆಲ್ಪೀ........

ನಿಜದ ನೆಲೆಯ  ಭಾವಚಿತ್ರ
       
ಸೆಲ್ಫೀಯೊಳಗೇನಿದೆ? ಏನಿಲ್ಲ? ಇರುವುದೆಲ್ಲವೂ ಇದೆ. ಕಂಡದ್ದನ್ನು ಮಾತ್ರವಲ್ಲದೆ ಕಾಣದ್ದನ್ನೂ, ಕಾಣಬೇಕಾದುದನ್ನೂ ಕಾಪಿಟ್ಟಿದೆ. ಕ್ಯಾಮರಾದೊಳಗಿನ ಸೆಲ್ಫೀ ನೋಡಿದ್ದನ್ನು ಅದಲು ಬದಲಾಗಿ ತೋರಿಸುತ್ತೆ ಅಷ್ಟೇ!  ದಿಕ್ಕು ಬದಲಾಗಿ ಕೆಲವೊಮ್ಮೆ ನೋಡುವವರ ದಿಕ್ಕೇ ಬದಲಾಗುತ್ತದೆಯಾದರೂ ಉಳಿದದ್ದೆಲ್ಲವೂ ಸುಸ್ಪಷ್ಟ.  ಆದರೆ ನಳಿನಿ ಭೀಮಪ್ಪರವರ ಸೆಲ್ಫೀಯ ಬಿಂಬದೊಳಗೆ ಜೀವನದ ಅನುಭವಕಥನವು ರಸಕವಳದಂತೆ ದಟ್ಟವಾಗಿ ಆವರಿಸಿಕೊಂಡಿದೆ. ಬಯಲುಸೀಮೆ ಮತ್ತು ಉತ್ತರದ ಧಾರವಾಡ ಬದುಕನೆಲ್ಲ ಇಂಚಿಂಚಾಗಿ ಉಂಡು, ತಿಂದು, ತೇಗುವುದು ಮಾತ್ರವಲ್ಲದೆ ಹತ್ತಿರ ಬಂದವರ ಉಡಿಯೊಳಗಿನ ಬೆಲ್ಲವನ್ನೂ ಓದುಗರಿಗೆ ಉಣಬಡಿಸುವ ಪ್ರಬಂಧಗಳಿವು. ಓದುತ್ತಾ ಹೋದಂತೆ ಓದುಗರ ಸ್ವತ್ತನ್ನೇ ಕದ್ದು ದಾಖಲಿಸಿದ ಕಥನಗಳಂತೆ ಭಾಸವಾಗುವ ಮೂವತ್ತೆರಡು ಪ್ರಬಂಧಗಳು ಹೊಸ ಹೊಸ ನೋಟವನ್ನು ವಿಸ್ತರಿಸುವ ವಿಡಿಯೋ ತುಣುಕುಗಳಂತೆ ಸರಿದು ಹೋಗುತ್ತವೆ. ಮುಖ್ಯವಾಗಿ ಇರುವುದನ್ನೆಲ್ಲ ಮುಕ್ತವಾಗಿ ಹಂಚಿಕೊಳ್ಳುವ ಎದೆಗಾರಿಕೆ, ಪ್ರಾದೇಶಿಕ ಭಾಷಾ ಸೊಗಡು ಮತ್ತು ಮುನ್ನಡೆಸಿಕೊಂಡು ಹೋಗುವ ರೀತಿಗಳೆ ಕೃತಿಯನ್ನು ಮತ್ತು ಕೃತಿಕಾರರನ್ನು ಗೆಲ್ಲಿಸಿವೆ.  ಒಂದು ವಿಧದಲ್ಲಿ ಕೃತಿಕಾರರ  ಆತ್ಮಕಥನದ ಮೊದಲ ಭಾಗವಾಗಿ, ಈ ನೆಲದ ಸಮಸ್ತರ ಬಾಲ್ಯವಾಗಿ, ಬದುಕಾಗಿ ಎದುರುಗೊಳ್ಳುತ್ತವೆ. ವರ್ತಮಾನ, ಭೂತ ಹಾಗೂ ಭವಿಷ್ಯದ ತಕ್ಕಡಿಯಲ್ಲಿ ಓಲಾಡುತ್ತಾ ನಕ್ಕು, ನಲಿಸಿ, ಕೆಲವೊಮ್ಮೆ ಅಳಿಸಿ, ನೀತಿಪಾಠ ಹೇಳಿ, ವ್ಯಂಗ್ಯವಾಗಿ ಚುಚ್ಚಿ ಬದುಕನ್ನು ಅಪ್ಯಾಯಮಾನವಾಗಿ ಪ್ರೀತಿಸುವಂತೆ ಒತ್ತಾಯಿಸುತ್ತವೆ; ಕಿರುಸಂಗತಿಗಳಲ್ಲಿರುವ ಭವ್ಯತೆಯನ್ನು, ಅಂತರಾಳದ ಕತ್ತಲು-ಬೆಳಕನ್ನು ವಿಧವಿಧವಾಗಿ ಎದುರುಗೊಂಡು, ನಮ್ಮ ನೋಟದ ಮಿತಿಯನ್ನು ಹದವಾಗಿ ತಿಕ್ಕಿ, ಬೆಳಕನಿಡುತ್ತವೆ.
      ಬದುಕಲ್ಲಿ ಕಂಡುಂಡ ಅನುಭವಗಳನ್ನೇ ಮೂಲ ಬಂಡವಾಳ ಮಾಡಿಕೊಂಡು ಹಾಸ್ಯದ ಸಾರಥ್ಯದಲ್ಲಿ ಸಾಗುವ ಇಲ್ಲಿನ ಪ್ರಬಂಧಗಳನ್ನು ಒಂದೆರಡು ಸೆಲ್ಫೀಗಳಲ್ಲಿ ಹಿಡಿದಿಡಲು ಸಾಧ್ಯವಿಲ್ಲ. ನಳಿನಿಯವರ ಕಣ್ಣೋಟದ ಪ್ರಪಂಚದ ನೆಪದಲ್ಲಿ ಹತ್ತು-ನೂರು ಪ್ರಪಂಚಗಳನ್ನೆಲ್ಲ ಒಮ್ಮೆಲೆ ಸೆರೆಹಿಡಿದ ವಿಶಾಲ ಕಡಲ ಚಿತ್ರಗಳಾಗಿ ಅಲ್ಲಿಗಲ್ಲಿಗೆ ಬಿದ್ದುಕೊಂಡಿವೆ. ಮುಟ್ಟಿದರೆ ಇಂಚಿಂಚಿಗೆ ಬದುಕಿನ ನವನವೀನ ವಿಸ್ಮಯದ ನೆರೆ ತೊರೆಗಳಾಗಿ ಹರಿದು, ನೆಗೆದು ಚಿಮ್ಮತ್ತಲೆ ನಕ್ಕು, ನಗಿಸಿ ಹಗುರಾಗಿಸುತ್ತವೆ. ಬರೀ ವರದಿ ವಾಚನವಾಗದೆ, ನೋಟವಾಗದೆ, ಹೇಳಿ-ಕೇಳಿದ ಸುದ್ದಿಯೂ ಆಗದೆ ಭವದ ನೆರಳು-ಬೆಳಕನ್ನು ಸಾಣೆಹಿಡಿದು, ನೆಟ್ಟ ತುಂಬುಬಾಳಿನ ಬೆಳಕಿನ ಬೀಜಗಳಾಗಿವೆ; ನಿಜದ ನೆಲೆಯ  ಭಾವಚಿತ್ರಗಳಾಗಿವೆ.
    ಭಾಷೆಯನ್ನು ನವುರಾಗಿ ದುಡಿಸಿಕೊಳ್ಳುವ ನಳಿನಿಯವರ ಕ್ಯಾಮರಾದಲ್ಲಿ ಲೆಕ್ಕವಿಲ್ಲದಷ್ಟು ಸೆಲ್ಪೀಗಳು!  ಸಿದ್ಧಮಾದರಿಯ ಯಾವುದೇ ದಾರಿಗೆ ಅಂಟಿಕೊಳ್ಳದೆ, ಪಂಥದ ಬಂಧದೊಳಗೂ ಸಿಲುಕದೆ ಮನಬಂದ ಕಡೆಗೆ ಎಚ್ಚರಿಕೆಯಿಂದ ಇಟ್ಟ ಲವಲವಿಕೆಯ ಹೆಜ್ಜೆಗಳು ಸೆಲ್ಪೀಯನ್ನು ಸುಂದರವಾಗಿಸಿವೆ. ನೋಡಿದ ನೋಟವನ್ನು ಆಪ್ತವಾಗಿ ದಕ್ಕಿಸಿಕೊಂಡು, ಹದವಾಗಿ ತಿಕ್ಕಿ, ಸಂಭ್ರಮದಿಂದ ತೆಕ್ಕೆಗೆ ತೆಗೆದುಕೊಳ್ಳುವ, ಕೇಂದ್ರಸ್ಥಾನದಲ್ಲಿ ನಿಂತು ಯಾವುದೆ ಹಮ್ಮು-ಬಿಮ್ಮುಗಳಿಲ್ಲದೆ ದಾಖಲಿಸುವ ಇವರ ನಡೆ ಮೆಚ್ಚುವಂಥದ್ದು. ಆತ್ಮಾವಲೋಕನಕ್ಕೆ ಒತ್ತಾಯಿಸಿ, ನಗುತ್ತಲೆ ಎದೆಗಿರಿದರೂ ತಣ್ಣಗೆ ತಿಳಿಯಾಗಿಸುವ  ಇಲ್ಲಿನ ಬರವಣಿಗೆಗೆ ಹೆಚ್ಚಿನ ಆಯುಷ್ಯ ಖಂಡಿತವಾಗಿ ದಕ್ಕುತ್ತದೆ.
     ಹಿಂದಿನ ತಲೆಮಾರಿನವರಿಗೆ ಹಳ್ಳಿಗಳಲ್ಲಿ ದಕ್ಕುತ್ತಿದ್ದ ಸಮೃದ್ಧ ಬಾಲ್ಯವನ್ನು ಮತ್ತೆ ಮತ್ತೆ  ನೆನಪಿಸುವ ಇಲ್ಲಿನ ಪ್ರಬಂಧಗಳು ಇಂದಿನ ಬದುಕು ಮತ್ತು ಬಾಲ್ಯದ ಬಗೆಗೆ ವಿಷಾದವನ್ನು ತುಂಬಿ, ಅಣುಕಿಸುತ್ತವೆ. ಇಂದು ತಲೆಎತ್ತಿರುವ ಇಂಟರ ನ್ಯಾಶನಲ್ ಶಾಲೆಗಳು ಒದಗಿಸುವ ಶಿಕ್ಷಣಕ್ಕಿಂತ ಉಚ್ಛವಾದ ಜೀವನ ಪಾಠ ನೀಡಿ ಬದುಕನ್ನು ಗೆಲ್ಲಿಸುತ್ತವೆ ಎಂಬುದಕ್ಕೆ ಲೇಖಕಿಯೇ ಉದಾಹರಣೆಯಾಗಿ ನಿಲ್ಲುತ್ತಾರೆ. ಪುರಾಣ, ಇತಿಹಾಸ, ರಾಮಾಯಣ ಮತ್ತು ಮಹಾಭಾರತದ ಪಾತ್ರಚಿತ್ರಣಗಳು ಬದುಕಿನ ಭಾಗವಾಗಿಯೇ ಹಾಸುಹೊಕ್ಕಾಗಿರುತ್ತವೆ ಎಂಬುದಕ್ಕೆ ಅನೇಕ ಸಾಕ್ಷಿಗಳು ದಾರಿಯುದ್ದಕ್ಕೂ ಸಿಗುತ್ತಲೆ ಹೋಗುತ್ತವೆ. ಇದರ ಜೊತೆಗೆ ಜೊತೆಯಾಗುವ ಕುಟುಂಬ, ಗಂಡ, ಹೆಂಡತಿ, ಮಕ್ಕಳು ಹಾಗೂ ಸಾಮಾಜಿಕ ವ್ಯವಸ್ಥೆಯೊಂದಿಗಿನ ಬಾಳ್ವೆಯ ಸಮರಸವನ್ನು ತಿಳಿಯಾಗಿ ಉಣಬಡಿಸಿ, ಸಹಜ ಸುಂದರ ಬದುಕಿಗೆ ದಾರಿ ತೋರಿಸುವ ಸಹಜ ಪ್ರಬಂಧಗಳು ಒಟ್ಟುಗೂಡಿವೆ.
     ನಳಿನಿಯವರ ಬಾಲ್ಯದಿಂದ ಇಲ್ಲಿಯವರೆಗಿನ ಎಲ್ಲಾ ಸಂಗತಿಗಳು ಪ್ರವೇಶ ಪಡೆದಿದ್ದು, ಕಾಲೇಜು ಬದುಕಿನ ಯಾವ ವಿಷಯಗಳಿಗೂ ಸಿಗದ ಅವಕಾಶ ಸೋಜಿಗವೆನಿಸುತ್ತದೆ.  ಒಟ್ಟು ಪ್ರಬಂಧಗಳನ್ನಿಟ್ಟು ನೋಡಿದಾಗ ಅದೊಂದು ಸ್ಪೇಸ್ ಖಾಲಿಯಾಗಿ ಉಳಿದುಬಿಡುತ್ತದೆ.  ಎಲ್ಲಾ ಹೂವುಗಳು ಮುಡಿ ಸೇರಲಾರವು; ಎಲ್ಲಾ ಪ್ರಬಂಧಗಳು ಸಹಜವಾಗಿ ಓದಿಸಿಕೊಂಡು ಹೋದರೂ ಕೆಲವು ಸಪ್ಪೆ ಎನಿಸದಿರದು. ಕೆಲವೊಂದು ಪ್ರಸಂಗಗಳು ವಿನಾಕಾರಣ ಓಡಿ ದಣಿದಂತೆ ಕಾಣಿಸುತ್ತವೆ. ಭಾಷೆಯನ್ನು ಇನ್ನಷ್ಟು ಮೊನಚಾಗಿ ಬಳಸಿಕೊಳ್ಳಲು ಸಾಕಷ್ಟು ಅವಕಾಶಗಳಿತ್ತು.  ಆದರೂ ಭವಿಷ್ಯದಲ್ಲಿ ಕನ್ನಡ ಸಾಹಿತ್ಯದ ಪ್ರಮುಖ ಪ್ರಬಂಧಕಾರ್ತಿಯರ ಸಾಲಿನಲ್ಲಿ ಗಟ್ಟಿಯಾಗಿ ನಿಲ್ಲಬಲ್ಲ ಹೆಸರು ನಳಿನಿ ಭೀಮಪ್ಪಯವರದ್ದಾಗಿರಲಿದೆ ಎಂದು ಧೈರ್ಯವಾಗಿ ಹೇಳಬಹುದು.
    ಇಲ್ಲಿನ ಪ್ರಬಂಧಗಳು ಸಹಜ ಮಾತುಕತೆಯಂತೆ, ಹರಟೆಯಂತೆ ಕಾಣಿಸಿದರೂ ಗಂಭೀರವಾದ ಅನೇಕ ಸಂಗತಿಗಳೆಡೆಗೆ ಗಮನ ಸೆಳೆಯುತ್ತವೆ. ನಗರ ಬದುಕಿನ ಬವಣೆಗಳನ್ನು ಬಿಚ್ಚಿಡುತ್ತಲೇ ಸಾಮಾನ್ಯ ಕಾರ್ಮಿಕರೆಡೆಗಿನ ಕರುಣೆ, ಸೆಲ್ಫೀ ಪ್ರಪಂಚದ ಗೀಳು, ಪುನರ್ಬಳಕೆಯೆಡೆಗಿನ ನೋಟ, ಸಿರಿವಂತ ಕಾಯಿಲೆಗಳ ವರ್ಣಮಯ ಜಗತ್ತಿನ ಅನಾವರಣ, ಕಣ್ಣು ಮತ್ತು ಕೈಗಳ ಕರಾಮತ್ತು, ಇಂದಿಗೂ ನೀಗದ ನೀರಿನ ಬವಣೆ, ರಸ್ತೆಗಳ ವಿಕಾರತೆ, ಮೌಢ್ಯತೆಯಿಂದ ಹೊರಬಾರದ ಜನರ ಮನಸ್ಥಿತಿ, ಮಾಧ್ಯಮದವರ ಅಸಲಿಯತ್ತು, ಟ್ರಯಲ್ ರೂಮಿನ ಟ್ರೇಲರ್, ಮುಖಪುಸ್ತಕ ಮತ್ತು ಇತರೆಡೆಗಿನ ಲಿಂಗಭೇದವಿಲ್ಲದ ಮುಖವಾಡ, ದುರ್ವ್ಯಸನಗಳಿಗೆ ಬಲಿಯಾಗುತ್ತಿರುವ ಯುವಪ್ರಪಂಚ ಸೇರಿದಂತೆ ನೂರಾರು ಸಂಗತಿಗಳ ಕಡೆಗೆ ಸೂಕ್ಷ್ಮ ದೃಷ್ಠಿಯನ್ನು ಬೀರುತ್ತವೆ; ಚಾಟಿಯನ್ನೂ ಬೀಸುತ್ತವೆ. ಅದರಂತೆ ಹಳ್ಳಿಯ ಬದುಕಿನ ಸಮೃದ್ಧತೆ, ಮುಗ್ಧಪ್ರಪಂಚದ ಭಾವ-ಬೆಸುಗೆಯ ದಟ್ಟ ಅನುಭವಗಳು, ಸಮರಸದ ಪಾಠ ಹೇಳುವ ದಾಂಪತ್ಯ ಬದುಕಿನ ಸನ್ನಿವೇಶಗಳು, ಬಹುತ್ವದ ಭಾರತವನ್ನು ಪ್ರತಿನಿಧಿಸುವ ಪಯಣದ ಸೊಗಸು ಹಾಗೂ ಉತ್ತರದ ಬದುಕು ಮತ್ತು ರೊಟ್ಟಿಯ ಪ್ರಪಂಚದೊಂದಿಗೆ ಹತ್ತಾರು ಸಂಗತಿಗಳನ್ನು ಆಪ್ತವಾಗಿ ತೆರೆದಿಡುತ್ತವೆ.
    ತಮ್ಮ ವ್ಯಕ್ತಿತ್ವ ಮತ್ತು ಕುಟುಂಬದ ಕತ್ತಲು ಬೆಳಕನ್ನು  ಮುಕ್ತವಾಗಿ ತೆರೆದಿಡುವ  ಲೇಖಕಿಯು ಕೃತಿಕಾರರ ಬದ್ಧತೆಗೆ ಸಾಕ್ಷಿಯಾಗುತ್ತಾರೆ. ಬಹಳ ಸಂಭ್ರಮದಿಂದಲೆ ತಮ್ಮನ್ನು ತಿಂಡಿಪೋತಿಯೆಂದು ಒಪ್ಪಿಕೊಳ್ಳುವ, ಮಾತಿನ ಮಲ್ಲಿಯಾಗಿ ಬದಲಾಗಿರುವ, ಮೇಕಪ್ಪು, ಸೆಲ್ಫೀ, ಟ್ರಯಲ್ ರೂಂ ಮುಂತಾದ ಸಂಗತಿಗಳೆಡೆಗಿನ ಪ್ರೇಮವನ್ನು, ಪತಿರಾಯರ ಸಂಕಟಗಳನ್ನು, ದಮ್ ಎಳೆಯೋ ಕುಟುಂಬದವರನ್ನು, ಮಕ್ಕಳನ್ನು, ಸಮಾಜವನ್ನು ಹಾಗೂ ಹತ್ತಿರಕ್ಕೆ ಬಂದವರೆಲ್ಲರ ಜನ್ಮ ಜಾಲಾಡುವ ಗುಣ ಹಾಸ್ಯದ ಅಂಗಳದಲ್ಲಿಯೇ ಗಂಭೀರವಾದ ಹತ್ತಾರು ಸಂಗತಿಗಳ ಮೇಲೆ ಬೆಳಕು ಚೆಲ್ಲುತ್ತದೆ. ಹಾಗೂ ಆಡುಮಾತಿನ ಶೈಲಿಯ ಬರವಣಿಗೆಯು ಎದುರಿಗೆ ಕುಳಿತುಕೊಂಡು ಅಣ್ಣನಂತೆ, ಅಕ್ಕಳಂತೆ, ಗೆಳೆಯ-ಗೆಳತಿಯಂತೆ  ಮಾತಿಗಿಳಿದು, ಓದು ಮುಗಿದ ಮೇಲೆಯೂ ಕೈ ತೊಳೆದ ನಂತರವೂ ಉಳಿಯುವ ಮೃಷ್ಟಾನ್ನದ ಪರಿಮಳದಂತೆ ಉಳಿದುಬಿಡುತ್ತವೆ; ಎದೆಯೊಳಗೆ ಹಾಸ್ಯಸಂಜೆ ನಡೆಸುತ್ತಲೇ ಇರುತ್ತವೆ; ಡಿಲೀಟ್ ಮಾಡಿದ ನಂತರವೂ ಸೆಲ್ಫೀಯ ಈ ಪಟ ಕಣ್ಮನದೊಳಗೆ ಶಾಶ್ವತವಾಗಿ ಉಳಿದುಬಿಡುತ್ತದೆ.
                * * * * * 
ಎಂ.ಡಿ.ಚಿತ್ತರಗಿ
ಹುನಗುಂದ
                                

Popular posts from this blog

ಕಥಾತಪಸ್ವಿ - ಅಬ್ಬಾಸ್ ಮೇಲಿನಮನಿ

ಕವಿತೆ - ಗಾಂಧಿ!!!