ಸೆಲ್ಪೀ........
ನಿಜದ ನೆಲೆಯ ಭಾವಚಿತ್ರ ಸೆಲ್ಫೀಯೊಳಗೇನಿದೆ? ಏನಿಲ್ಲ? ಇರುವುದೆಲ್ಲವೂ ಇದೆ. ಕಂಡದ್ದನ್ನು ಮಾತ್ರವಲ್ಲದೆ ಕಾಣದ್ದನ್ನೂ, ಕಾಣಬೇಕಾದುದನ್ನೂ ಕಾಪಿಟ್ಟಿದೆ. ಕ್ಯಾಮರಾದೊಳಗಿನ ಸೆಲ್ಫೀ ನೋಡಿದ್ದನ್ನು ಅದಲು ಬದಲಾಗಿ ತೋರಿಸುತ್ತೆ ಅಷ್ಟೇ! ದಿಕ್ಕು ಬದಲಾಗಿ ಕೆಲವೊಮ್ಮೆ ನೋಡುವವರ ದಿಕ್ಕೇ ಬದಲಾಗುತ್ತದೆಯಾದರೂ ಉಳಿದದ್ದೆಲ್ಲವೂ ಸುಸ್ಪಷ್ಟ. ಆದರೆ ನಳಿನಿ ಭೀಮಪ್ಪರವರ ಸೆಲ್ಫೀಯ ಬಿಂಬದೊಳಗೆ ಜೀವನದ ಅನುಭವಕಥನವು ರಸಕವಳದಂತೆ ದಟ್ಟವಾಗಿ ಆವರಿಸಿಕೊಂಡಿದೆ. ಬಯಲುಸೀಮೆ ಮತ್ತು ಉತ್ತರದ ಧಾರವಾಡ ಬದುಕನೆಲ್ಲ ಇಂಚಿಂಚಾಗಿ ಉಂಡು, ತಿಂದು, ತೇಗುವುದು ಮಾತ್ರವಲ್ಲದೆ ಹತ್ತಿರ ಬಂದವರ ಉಡಿಯೊಳಗಿನ ಬೆಲ್ಲವನ್ನೂ ಓದುಗರಿಗೆ ಉಣಬಡಿಸುವ ಪ್ರಬಂಧಗಳಿವು. ಓದುತ್ತಾ ಹೋದಂತೆ ಓದುಗರ ಸ್ವತ್ತನ್ನೇ ಕದ್ದು ದಾಖಲಿಸಿದ ಕಥನಗಳಂತೆ ಭಾಸವಾಗುವ ಮೂವತ್ತೆರಡು ಪ್ರಬಂಧಗಳು ಹೊಸ ಹೊಸ ನೋಟವನ್ನು ವಿಸ್ತರಿಸುವ ವಿಡಿಯೋ ತುಣುಕುಗಳಂತೆ ಸರಿದು ಹೋಗುತ್ತವೆ. ಮುಖ್ಯವಾಗಿ ಇರುವುದನ್ನೆಲ್ಲ ಮುಕ್ತವಾಗಿ ಹಂಚಿಕೊಳ್ಳುವ ಎದೆಗಾರಿಕೆ, ಪ್ರಾದೇಶಿಕ ಭಾಷಾ ಸೊಗಡು ಮತ್ತು ಮುನ್ನಡೆಸಿಕೊಂಡು ಹೋಗುವ ರೀತಿಗಳೆ ಕೃತಿಯನ್ನು ಮತ್ತು ಕೃತಿಕಾರರನ್ನು ಗೆಲ್ಲಿಸಿವೆ. ಒಂದು ವಿಧದಲ್ಲಿ ಕೃತಿಕಾರರ ಆತ್ಮಕಥನದ ಮೊದಲ ಭಾಗವಾಗಿ, ಈ ನೆಲದ ಸಮಸ್ತರ ಬಾಲ್ಯವಾಗಿ, ಬದುಕಾಗಿ ಎದುರುಗೊಳ್ಳುತ್ತವೆ. ವರ್ತಮಾನ, ಭೂತ ಹಾಗೂ ಭವಿಷ್ಯದ ತಕ್ಕಡಿಯಲ್ಲ...