ಕಥಾತಪಸ್ವಿ - ಅಬ್ಬಾಸ್ ಮೇಲಿನಮನಿ
ಕಥಾತಪಸ್ವಿ.......
(ಬದುಕು ಬರಹದಿಂದ ಆಯ್ದ ಭಾಗ)
“ಭಾರತವನ್ನು ತಿಳಿಯಬೇಕೆಂದರೆ ಇಡೀ ಭಾರತವನ್ನೆಲ್ಲ ಸುತ್ತಲೇಬೇಕಿಲ್ಲ; ಭಾರತದ ಇತಿಹಾಸವನ್ನೆಲ್ಲ ಓದಲೇಬೇಕಿಲ್ಲ. ಸ್ವಾಮಿ ವಿವೇಕಾನಂದರ ಬದುಕನ್ನು ಅರಿತುಕೊಂಡರೆ ಸಾಕಷ್ಟೇ” ಎಂದ ರವೀಂದ್ರನಾಥ ಠ್ಯಾಗೋರರ ಮಾತು ಎಷ್ಟೊಂದು ಅರ್ಥಪೂರ್ಣ. ಅದರಂತೇ ಈ ನಾಡಿನಲ್ಲಿ ಅದೆಷ್ಟೋ ಶತಮಾನಗಳ ಹಿಂದೆ ಬಾಳಿ ಬದುಕಿದ ಅನೇಕ ಮಹನೀಯರು, ರಾಜ-ಮಹಾರಾಜರು, ತತ್ವಜ್ಞಾನಿಗಳು, ಸಾಧಕರು ಮಾತ್ರವಲ್ಲದೇ ಸಾಮಾನ್ಯರೂ ಕಾಲದೋಘದಲ್ಲಿ ಸರಿದು ಹೋಗಿದ್ದರೂ ಕೊಟ್ಟ ಕೊಡುಗೆಯಿಂದ, ಬಿತ್ತಿದ ಬೀಜದಿಂದ ಇಂದಿಗೂ ಜೀವಂತವಾಗುತ್ತಲೇ ಇದ್ದಾರೆ. ನಿತ್ಯ ಮರುಹುಟ್ಟು ಪಡೆಯುತ್ತಲೇ ಇದ್ದಾರೆ. ಕೋಟಿ-ಕೋಟಿ ಜನ ಸತ್ತ ಮರುಗಳಿಗೆಯಲ್ಲೇ ನೆನಪಿನ ಪಾತಾಳದಲ್ಲಿ ಕೊಚ್ಚಿ ಹೋದರೆ, ಜೀವಂತವಿದ್ದಾಗಲೇ ಜನಮಾನಸದಿಂದ ಕಣ್ಮರೆಯಾದಂತೆ ಬದುಕುತ್ತಿರುವವರ ಸಂಖ್ಯೆಯೂ ಕಡಿಮೆಯೇನಿಲ್ಲ. ಸಾಗರೋಪಾದಿಯ ಈ ಜೀವನಚಕ್ರದಲ್ಲಿ ಬೊಗಸೆಯಷ್ಟಿರುವ ಸಾಧಕರು ತಮ್ಮ ಆಯುಷ್ಯದ ಚೌಕಟ್ಟಿನೊಳಗೆ ವಿಭಿನ್ನವಾಗಿ ಬದುಕಿ, ಸಿಹಿಗಿಂತಲೂ ಕಹಿಯನ್ನೇ ಹೆಚ್ಚಾಗಿ ಉಂಡುಟ್ಟು, ಕಾಲ, ಧರ್ಮ ಹಾಗೂ ಸೀಮಾತೀತವಾದ ಆದರ್ಶಗಳನ್ನೇ ನಡೆ-ನುಡಿಯಲ್ಲಿ ಉಸಿರಾಡಿ, ಜಗದ ಕತ್ತಲೆಗೆ ಎಣ್ಣೆಯಾದವರು; ಬತ್ತಿಯಾದವರು; ದೀಪವಾದವರು. ಇಂದಿಗೂ ಅವರು ಬಿಟ್ಟುಹೋದ, ಕೊಟ್ಟುಹೋದ ಆದರ್ಶದ ಬೆಳಕಿನಲ್ಲೇ ಈ ಜಗತ್ತು ಅಂಬೆಗಾಲಡಿಯಲಿ ಉಸಿರಾಡುತ್ತಾ ಸಾಗುತ್ತಿದೆಯೆಂಬುದರಲ್ಲಿ ಯಾವುದೇ ಸಂದೇಹವಿಲ್ಲ.
ಹತ್ತಾರು ಶತಮಾನಗಳ ಇತಿಹಾಸವನ್ನು ಜತನದಿಂದ ಕಾಪಿಟ್ಟುಕೊಂಡು ಬಂದಿರುವ ನಾವು ಅದನ್ನೇ ಪಠ್ಯ ಮತ್ತು ಪಠ್ಯೇತರವಾಗಿ ತಿಳಿದು ಅರಗಿಸಿಕೊಳ್ಳುತ್ತಲೇ ಶತಮಾನಗಳ ಹೆಜ್ಜೆ ಹಾಕುತ್ತಲೇ ಸಾಗಿದ್ದೇವೆ. ಕ್ರಿ.ಶ.ಪೂರ್ವಕಾಲಘಟ್ಟದ ಬುದ್ಧ-ಮಹಾವೀರರು ಆದರ್ಶವಾಗುತ್ತಾರೆ. ರೋಮನ್ ಸಾಮ್ರಾಜ್ಯದ ವೈಭವ ಕಣ್ಣಂಚಲಿ ಮಿನುಗಿ ಹೋಗುತ್ತದೆ. ಪ್ಲೇಟೋ, ಅರಿಸ್ಟಾಟಲ್, ಅಲೆಗ್ಸಾಂಡರರಂತೆ ಅಶೋಕ ನೆನಪಾಗುತ್ತಾನೆ. ಐಫೆಲ್ ಟಾವರ್, ಸ್ಟ್ಯಾಚು ಆಫ್ ಲಿಬರ್ಟಿ, ಪೀಸಾ ವಾಲುಗೋಪುರದಂತೆ, ತಾಜಮಹಲ್-ಗೋಳಗುಮ್ಮಟ-ಗೊಮ್ಮಟೇಶ್ವರರು, ಕೆಂಪುಕೋಟೆಯೂ, ರಾಮಸೇತುವೆಯೂ ಮುಖ್ಯವಾಗುತ್ತದೆ. ಲಿಂಕನ್, ಮಂಡೇಲಾ, ಬೋನಾಪಾರ್ಟ್, ನ್ಯೂಟನ್, ಪೀಲೆಯಂತೆ, ಬಸವಣ್ಣ, ಗಾಂಧೀ, ತೆರೇಸಾ, ಧ್ಯಾನಚಂದ್ ರೂ ನೆನಪಿನಾಳದ ಚಿತ್ರವಾಗುತ್ತಾಲೇ ಹೋಗುತ್ತಾರೆ. ಅದರಂತೇ ಶರಣರು, ದಾಸರು, ಸೂಫಿಗಳು, ಕವಿ-ಕಲಾವಿದರು, ವಿಜ್ಞಾನಿಗಳು ಹಾಗೂ ನಾಯಕ-ನೇತಾರರ ಪಟ್ಟಿ ನಮ್ಮ ಮಸ್ತಕದೊಳು ಸಾಲುಗಟ್ಟುತ್ತಲೇ ಸಾಗುತ್ತದೆ. ಆಧುನಿಕ ಕಾಲಘಟ್ಟದಲ್ಲಿ ಈ ಪಟ್ಟಿ ಹಲವು ಪಟ್ಟುಗಳಲ್ಲಿ ಉದ್ದವಾಗುತ್ತಾ ಹೋಗುತ್ತದೆ. ಸಾಧಕರ ಸಂತೆಯೇ ಕಣ್ಮುಂದೆ ನೆರೆದು ಬಿಡುತ್ತದೆ!. ಇಷ್ಟಿದ್ದರೂ, ಎಲ್ಲರ, ಬದುಕಿರುವವರೆಲ್ಲರ ಕೋಟಿ-ಕೋಟಿ ನಾಲಿಗೆಗಳ ಮೇಲೆ ನಿತ್ಯ ಸುಳಿಯುವ ಹೆಸರುಗಳು ಅಂದಿನಂತೆಯೇ ಇಂದೂ ಅವೇ ಬೆರಳೆಣಿಕೆಯ ಹೆಸರುಗಳಷ್ಟೇ ಎಂಬುದು ವಿಪರ್ಯಾಸ!.
ಸತ್ಯಕ್ಕೆ ಹರಿಶ್ಚಂದ್ರ, ಧರ್ಮಕ್ಕೆ ಧರ್ಮರಾಯ, ಪಾತಿವ್ರತ್ಯಕ್ಕೆ ಸೀತೆ-ಸಾವಿತ್ರಿಯರು, ಅಹಿಂಸೆ-ಸತ್ರಾಗ್ರಹಕ್ಕೆ ಗಾಂಧಿ, ಸಾಮಾಜಿಕ ಹೋರಾಟಕ್ಕೆ ಅಂಬೇಡ್ಕರ್, ದೇಶಭಕ್ತಿಗೆ ಭಗತ್ ಸಿಂಗ್ ಹೀಗೆ ಇನ್ಕೆಲವು ಹೆಸರುಗಳು ಮುಂಚೂಣಿಯಲ್ಲಿ ನುಗ್ಗಿಬರುತ್ತವೆ. ಹಾಗಾದರೆ ಇವರಿಗಿಂತ ಮುಂಚೆ, ಆಚೆ-ಈಚೆ, ಅಂದು-ಇಂದು ಬದುಕಿದ, ಬದುಕುತ್ತಿರುವ ಉಳಿದವರ ಪಾಡೇನು? ಇವರ ಬದುಕು ಲೆಕ್ಕಕ್ಕಿಲ್ಲವೇ? ಇವರಲ್ಲಿ ಸಾಧಕರೇ ಇಲ್ಲವೇ? ಸವೆದ ದಾರಿಯನ್ನೇ ಇನ್ನೆಷ್ಟು ದಿನ ಸವೆಸುವುದು ಎಂಬ ಪ್ರಶ್ನೆ ಸಹಜವಾಗಿ ಕಾಣಿಸುತ್ತದೆ. ಈ ಶತಮಾನದ ಸಾಧಕರ ಬಗೆಗೆ ನಮಗೆಷ್ಟು ಗೊತ್ತಿದೆ. ನಮ್ಮೊಂದಿಗೆ ಬದುಕುತ್ತಿರುವವರ ಬಗೆಗೆ ನಾವೆಷ್ಟು ತಿಳಿದಿದ್ದೇವೆ?. ತಿಳಿಯಬೇಕಿದೆ.? ಚೆಂದಾಗಿ ಕಾಣುವ ದೂರದ ಬೆಟ್ಟವನ್ನು ದುರ್ಬೀನಿನಿಂದ ನೋಡಿ, ನಲಿದು ಹೊಗಳುವ ನಾವು, ಹತ್ತಿರದ ಮೇರುವ್ಯಕ್ತಿತ್ವಗಳನ್ನೆಷ್ಡು ಬಲ್ಲೆವು? ನಿಜ ಸಾಧಕರು ಯಾರು? ಅವರ ನಡೆ, ನುಡಿ ಎಂತಿದೆ? ಎಂತಿರಬೇಕು?. ಮುಂತಾದ ಹತ್ತು ಹಲವು ಪ್ರಶ್ನೆಗಳು ಮತ್ತೆ ಮತ್ತೆ ಗೋಚರವಾಗುತ್ತಲೇ ಹೋಗುತ್ತಿವೆ. ಎಲ್ಲ ಕ್ಷೇತ್ರಗಳು ಇದರೆಡೆಗೊಂದು ಕಿರುನೋಟ ಬೀರಿ, ಆತ್ಮಾವಲೋಕನ ಮಾಡಿಕೊಳ್ಳಬೇಕಿರುವುದು ಇಂದಿನ ತುರ್ತೆನಿಸುತ್ತದೆ.
ಎಲೆಮರೆಯ ಕಾಯಿಗಳಂತಿದ್ದು, ಬದುಕಿನುದ್ದಕ್ಕೂ ತಮ್ಮನ್ನು ಗಂಧದಂತೆ ತೆಯ್ದುಕೊಂಡು, ಸಮೃದ್ದವಾದ ಫಲ-ಪುಷ್ಪಗಳನ್ನಿತ್ತು, ನಿಶ್ಶಬ್ದವಾಗಿ ಜಾರಿಹೋಗುವ ಘನವ್ಯಕ್ತಿತ್ವಗಳ ಘಮವನ್ನು ತಿಳಿಗಣ್ಣಿನಿಂದ ನೋಡಿ ಸಂಭ್ರಮಿಸಬೇಕಿದೆ. ಸಮೀಪದಿಂದ ನೋಡದ, ಕಾಣದ, ದೂರದ ಸತ್ಯಕ್ಕಿಂತಲೂ ಹತ್ತಿರದ ಸುಳ್ಳನ್ನೇ ಇನ್ನೊಮ್ಮೆ ದಿಟ್ಟಿಸಬೇಕಿದೆ. ಪರೀಕ್ಷಿಸುವ ಅಗತ್ಯವಿದೆ. ಒಮ್ಮೆ ಗೆದ್ದ ಕುದುರೆಗೆ ಮತ್ತೆ ಮತ್ತೆ ಜಯಜಯಕಾರ ಹಾಕುವುದರ ಬದಲು ಗೆಲುವಿನ ಸಮೀಪದಲ್ಲಿ ಸೋತವರ ಕಡೆಗೊಂದಿಷ್ಟು ದೃಷ್ಠಿ ಹಾಯಿಸಬೇಕಿದೆ. ಗೆಲ್ಲುವ ಕುದುರೆಗಳನ್ನು, ಕೆಚ್ಚಿನ ತಳಿಗಳನ್ನು, ಗಟ್ಟಿಹುರಿಗಳನ್ನು ಮೊದಲು ಪ್ರಜ್ಞಾಪೂರ್ವಕವಾಗಿ ಗುರುತಿಸಿ ಮುಖ್ಯವೇದಿಕೆಗೆ ತಂದು ನಿಲ್ಲಿಸುವ, ಪರೀಕ್ಷಿಸುವ ಗುರುತರ ಜವಾಬ್ದಾರಿಯನ್ನು ಹೆಗಲಿಗೇರಿಸಿಕೊಳ್ಳಬೇಕಾಗಿದೆ. ಇದನ್ನು ಯಾವುದೇ ಒಂದು ಕ್ಷೇತ್ರ ಇಲ್ಲವೇ ವ್ಯಕ್ತಿಗೆ ಸೀಮಿತವಾಗಿಸದೇ ಸೀಮಾತೀತವಾಗಿ ಅನ್ವಯಿಸಬೇಕಾದ ಅಗತ್ಯವಿದೆ. ಯಾಕೆಂದರೆ ಅದೆಷ್ಟೋ ಮೇರುಬೀಜಗಳು ಬೆಳೆಬೆಳೆಯುತ್ತಲೇ ಜೀವಂತಶವದಂತೆ ಕಮರಿಹೋದ ನಿದರ್ಶನಗಳು ಐತಿಹಾಸಿಕ ಕಾಲದೋಘದಲ್ಲಿ ನಿದರ್ಶನಗಳಾಗಿ ಕಾಣುತ್ತಲೇ ಹೋಗುತ್ತವೆ.
ಮೇಲಿನ ಸಂಗತಿಗಳೆಲ್ಲ ಎಲ್ಲಾ ರಂಗಗಳಿಗೆ ಅನ್ವಯಿಸುವ ಹಾಗೆ ಸಾಹಿತ್ಯ ಕ್ಷೇತ್ರಕ್ಕೂ ಹೆಚ್ಚಾಗಿ ಅನ್ವಯಿಸುತ್ತವೆ. ಹೊಸಗನ್ನಡ ಸಾಹಿತ್ಯ ಚರಿತ್ರೆಯನ್ನೆಲ್ಲ ಆಮೂಲಾಗ್ರವಾಗಿ ಪರಿಶೋಧಿಸಿದಾಗ, ವಾಸ್ತವದ ಸಾಹಿತ್ಯ ಪ್ರಪಂಚವನ್ನು ಸೂಕ್ಷ್ಮನೋಟದಿಂದ ದಿಟ್ಟಿಸಿದಾಗ ಒಳ-ಹೊರಗಿನ ಸತ್ಯದ ಮುಖವಾಡಗಳು ಮುಖಾಮುಖಿಯಾಗುತ್ತವೆ. ಪ್ರಾದೇಶಿಕ ಭಿನ್ನತೆಗಳು, ಧರ್ಮ-ಜಾತಿ-ಜನಾಂಗಗಳು, ಸಾಂಸ್ಕೃತಿಕ ರಾಜಕಾರಣಗಳು ಅಡಿಯಿಂದ ಮುಡಿವರೆಗೆ ಅಪ್ಪಳಿಸುತ್ತಲೇ ಸಾಗಿರುವ ವಾಸ್ತವದ ಬಿಂಬವನ್ನು ಕಾಣುತ್ತಲೇ ಹೋಗುತ್ತೇವೆ. ದಕ್ಷಿಣ ಕರ್ನಾಟಕ, ಮಲೆನಾಡು, ಕರಾವಳಿ, ಬಯಲುಸೀಮೆ ಹಾಗೂ ಉತ್ತರ ಕರ್ನಾಟಕಗಳೆಂಬ ಪ್ರಾತಿನಿಧ್ಯಕ್ಕಿಂತಲೂ ಸಾಹಿತ್ಯಿಕ ವೈಶಿಷ್ಟ್ಯತೆಗಳ ಗಟ್ಟಿತನಗಳೇ ಪ್ರಧಾನವಾಗಬೇಕಾಗಿದೆ. ಬರಹಗಾರನನ್ನು ಕೃತಿನಿಷ್ಟವಾಗಿ ಅಳೆದು, ತೂಗಿ, ಬೆಲೆಗಟ್ಟಬೇಕಾದುದು ಎಂದೆಂದಿಗೂ ಒಪ್ಪಬೇಕಾದ ವಿಚಾರ. ಓದುಗವರ್ಗ ಮಾತ್ರವಲ್ಲದೇ ಇಂದಿನ ವಿಮರ್ಶಾಲೋಕ ಕೂಡ ಸಂಕುಚಿತ ಮನೋವ್ಯಾಪಾರದ ಪರಿಧಿಯನ್ನು ದಾಟಿ, ಕನ್ನಡದ ಕೃತಿರತ್ನಗಳನ್ನು ಒರೆಹಚ್ಚಿ ನೋಡುವ ಮೂಲಕ ಕನ್ನಡಮ್ಮನ ವರಪುತ್ರರ ಒಳಗಂಧವನ್ನು ವಿಶಾಲ ಪ್ರಪಂಚದೊಳು ಪಸರಿಸುವಂತೆ ಮಾಡಬೇಕಾದ ಅಗತ್ಯತೆ ಎದ್ದು ಕಾಣುತ್ತಿದೆ. ನಾಡು-ನುಡಿಯ ಆರೋಗ್ಯಕರ ವಿಕಾಸಕ್ಕೆ ಇದು ಅತ್ಯಗತ್ಯವೆಂದು ತೋರುತ್ತದೆ.
ಕೋಟೆನಾಡಿನ ಕವಿ. ಕಥೆಗಾರ, ಕಾದಂಬರಿಕಾರ ಅಬ್ಬಾಸ್ ಮೇಲಿನಮನಿಯವರನ್ನು ಪರಿಚಯಿಸುವ ಮುನ್ನ ಇಷ್ಟೆಲ್ಲ ಪೂರ್ವಪೀಠಿಕೆ ಬೇಕೆನಿಸಿತು. ʼಕೆಸರಲ್ಲಿ ಹುಟ್ಟಿದ ಕಮಲದಂತೆʼ ಬಾಳಿ, ಬದುಕಿದ ಅಬ್ಬಾಸರ ಬದುಕಿನ ಸಂಕಥನ ಜಗದಗಲಕ್ಕೆ ತೆರೆದುಕೊಳ್ಳಬೇಕು. ʼಬಾಗಲಕೋಟೆಯ ಅಬ್ಬಾಸ್ ಮೇಲಿನಮನಿʼ ಎಂಬ ಹೆಸರು ಮುಖ್ಯವಾಗದೇ, ಅವರ ಬದುಕು-ಬರಹಗಳು ಪ್ರಮುಖವಾಗಿ, ಕೃತಿಗಳೊಡಲಿನ ಮೌಲ್ಯಗಳೇ ಪ್ರಧಾನವಾಗಿ ಸಾರಸ್ವತ ಲೋಕಕ್ಕೆ ಗೋಚರವಾಗಬೇಕಾಗಿದೆ. ಇದು ನಾಡಿನ ಮೂಲೆಮೂಲೆಯ, ಕಗ್ಗಾಡು ಪ್ರದೇಶದ, ಧರ್ಮದ, ಜಾತಿ-ಜನಾಂಗ-ಬುಡಕಟ್ಟಿನ ವ್ಯಕ್ತಿಗಳ ಸಾಹಿತ್ಯಕೃತಿಗಳಿಗೆಲ್ಲ ಅನ್ವಯವಾಗಬೇಕಿದೆ. ಪೂರ್ವಾಗ್ರಹಪೀಡಿತ ಕನ್ನಡಕಗಳನ್ನು ಕಿತ್ತೊಗೆದು, ಸಾಹಿತ್ಯಿಕ ಮೌಲ್ಯಗಳಿಂದ ನೋಡಿ ಗಟ್ಟಿಕಾಳುಗಳನ್ನುಳಿಸಿ ಜೊಳ್ಳನ್ನೆಲ್ಲ ತೆರೆಗೆ ಸರಿಸಬೇಕಿದೆ. ಇಲ್ಲವಾದರೆ ಮೇರುವ್ಯಕ್ತಿತ್ವಗಳೆಲ್ಲ ಅಜ್ಞಾತವಲಯದೊಳು ಉಸಿರುಗಟ್ಟಿ ಮರೆಯಾಗಿ, ಅರೆಬೆಂದ ಮುಖವಾಡಗಳೆಲ್ಲ ಗದ್ದುಗೆಯೇರಿ ಕನ್ನಡಮ್ಮನ ಕಗ್ಗೊಲೆಯಾದೀತು.
ಐತಿಹಾಸಿಕವಾಗಿ ಹಾಗೂ ಪಾರಂಪರಿಕವಾಗಿ ಹತ್ತು-ಹಲವು ವಿಶೇಷತೆಗಳನ್ನು ತನ್ನೊಡಲಲ್ಲಿಟ್ಟುಕೊಂಡಿರುವ ಬಾಗಲಕೋಟೆಯು ನಾಡಿನ ಇತಿಹಾಸ, ಸಂಸ್ಕೃತಿ ಹಾಗೂ ಸಾಹಿತ್ಯಕ್ಕೆ ತನ್ನದೇ ಆದ ಕೊಡುಗೆಗಳನ್ನು ನೀಡುತ್ತಲೇ ಬಂದಿದೆ. ಸಾಹಿತ್ಯಿಕವಾಗಿ ನೋಡುವುದಾದರೆ ಪ್ರಥಮ ತ್ರಿಪದಿರೂಪವೆನಿಸಿದ ʼಕಪ್ಪೆ ಅರಭಟ್ಟನ ಶಾಸನದಿಂದ ಆರಂಭವಾಗಿ, ಕವಿ ರನ್ನನಂತಹ ಶ್ರೇಷ್ಠ ದಿಗ್ಗಜನನ್ನು ನೀಡುವುದಷ್ಟೇ ಅಲ್ಲದೇ ಆಧುನಿಕ ಕಾಲಘಟ್ಟದಲ್ಲೂ ತನ್ನ ಕೊಡುಗೆಗಗಳನ್ನು ಮುಂದುವರಿಸಿದೆ. ಈ ನೆಲದ ಕವಿಗಳು, ಕಥೆ-ಕಾದಂಬರಿಕಾರರು, ಜನಪದ ತಜ್ಞರು, ಸಂಶೋಧಕರು ಹಾಗೂ ವಿವಿಧ ಕ್ಷೇತ್ರಗಳ ವಿದ್ವಾಂಸರು ಕನ್ನಡ ನಾಡು-ನುಡಿಯ ಸೇವೆಗಾಗಿ ಅವಿರತವಾಗಿ ಶ್ರಮಿಸುತ್ತಾ, ಮಹತ್ವದ ಕೃತಿರತ್ನಗಳನ್ನು ನೀಡುವ ಮೂಲಕ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ. ಇವರಲ್ಲಿ ಬೆರಳೆಣಿಕೆಯಷ್ಟು ಜನ ಪ್ರಾದೇಶಿಕತೆಯ ಗಡಿಯನ್ನು ಮೀರಿ ಪರಿಚಿತಗೊಂಡಿದ್ದರೆ, ಇನ್ಕೆಲವರು ಗಟ್ಟಿಕೃತಿಗಳನ್ನು ನೀಡಿಯೂ ತೆರೆಯ ಹಿಂದಿನ ಪಾತ್ರಗಳಂತೆ ಸರಿದು ಹೋಗಿದ್ದಾರೆ. ಇಂಥವರ ಸಾಲಿನಲ್ಲಿ ಕಾಣುವ ಮುಂಚೂಣಿ ಹೆಸರೆಂದರೆ ಕಥೆಗಾರ ಅಬ್ಬಾಸ್ ಮೇಲಿನಮನಿಯವರದು. ಇವರ ಬದುಕು ಬರಹಗಳನ್ನು ಇನ್ನಷ್ಟೇ ಅರೆದು ನೋಡಬೇಕಿದೆ.
*ಎಂ.ಡಿ.ಚಿತ್ತರಗಿ.*