*ಮುಳ್ಳು...*



ಕಾರಣವಿಲ್ಲದೇ
ಚುಚ್ಚುವುದೇ ಇಲ್ಲ ಮುಳ್ಳು!
ಕಾರಣವ ತಿಳಿದು, ಹೂರಣವ ಹಿಡಿದು
ತಾಳತಪ್ಪಿದ ಜಗದ ಹೆಜ್ಜೆಗೆ
ಚುಚ್ಚುಲೇಬೇಕು ಮುಳ್ಳು!
ಬೆಳಗಲೇಬೇಕು ಬಾಳು!


ಲೋಕದೂರಿನ ದಾರಿಗುಂಟ
ಸೊಂಬೇರಿ ಹೆಬ್ಬಾವುಗಳ ಗಾಢನಿದ್ರೆ!
ಮುಖವಾಡದ ಸಂತೆಯಲಿ
ಕಾವಲಿಲ್ಲದ ಕಾವಲಿ ತುಂಬ
ಸದಾ ಬೇಯುವ ಯಾರದೋ ರೊಟ್ಟಿ!
ಬೇಕಲ್ಲವೇ ಮುಳ್ಳು ?
ಎಚ್ಚರದ ಹಾಡಿಗೆ! ಬೆಚ್ಚನೆಯ ಗೂಡಿಗೆ!

ನಗುವ ಕಾಡಮಲ್ಲಿಗೆಗಂಟಿ
ಪರಿಮಳದ ಕಂಪ ಮೆಲ್ಲುತ
ಗೂಡು ಕಟ್ಟುವ ಕಾಡಸಿಪಾಯಿ!
ಬೆಳೆವ ಬೆಳೆಗೆ ಬೆಳಕ ಬೀರಿ
ಕಳ್ಳನೂರಿಗೆ ಬೇಲಿಯಾಗಿ
ಹೊಳೆಹೊಳೆವುದು ಬರಿಯ ಮೈಯಲಿ;
ಬೆನ್ನೆಲುಬಿಗೆ ಬೆನ್ನೆಲುಬಾಗಿ!


ಉಪವಾಸದಿ ಜೀತಗೈಯ್ವ
ಏಳುಸುತ್ತಿನ ಕೋಟೆಗೆ
ಕೊಡಲಿ ಪೆಟ್ಟಿನ ಸುಪ್ರಭಾತ!
ನಾಡಗೋಡೆಗೆ ಅಡ್ಡಬಿದ್ದು
ಬಾಳು ಕಾಯುವ ಗೆಳೆಯಗೆ
ಬೈಗುಳ ಮೆತ್ತಿದ  ಕತ್ತೆಯೊದೆತ!


ಮನದ ಗೋಡೆಯ ತುಂಬ
ರಂಗುರಂಗಿನ ಮುಳ್ಳು!
ನಾಡಗುಡಿಯ ಸುತ್ತ
ಹಸಿದ ಹಲ್ಲಿನ ಬೆಟ್ಟ!
ಹಕ್ಕಿ ಹಾಡಿಗೆ, ನವಿಲ ನಾಟ್ಯಕೆ
ಮೂಗು ಮುರಿದು, ಕೇಶ ಕೆರೆದು
ವಿಷದ ಲಾಲಿಯ ಹಾಡುತ
ಗರ್ಭ ಸೀಳುವ ಮೊನೆಗಳೇ
ನಿಜದ ಮುಳ್ಳಿನ ಗೊನೆಗಳು!

          *****
ಎಂ.ಡಿ.ಚಿತ್ತರಗಿ
ಕನ್ನಡ ಅಧ್ಯಾಪಕರು
ಹುನಗುಂದ.

Popular posts from this blog

ಕಥಾತಪಸ್ವಿ - ಅಬ್ಬಾಸ್ ಮೇಲಿನಮನಿ

ಸೆಲ್ಪೀ........

ಕವಿತೆ - ಗಾಂಧಿ!!!