ಬೆಳಗಿನೊಂದಿಗೆ ಒಂದು ಸುತ್ತು
ಜಾವದ ಬೇವು*
ಓ ಮನುಜಾ....
ಬಾ ಇಲ್ಲಿ....
ವಿರಮಿಸು ಬಾ...
ಎಲ್ಲಿಗೋಡುವೆ ಧಾವಂತದಲಿ..?
ಅನುದಿನವೂ ಅದೇ ಅವಸರ
ಸರಸರನೆ ಹೆಜ್ಜೆ ಹಾಕಿ, ಬಿರಬಿರನೆ ಓಡಾಡಿ
ಸುಳಿದು ಸುತ್ತಾಡಿ,
ಮೈಮುರಿದು ಬೆವರಿಳಿಸಿ
ಓಡೋಡಿ ಹೊಂಟೋಗುವಿ
ನಿತ್ಯ ಮುಂಜಾವಿನಲಿ!
ಏಕಿಷ್ಟು ಅವಸರ....?
ನೋಡು ನನ್ನನೊಮ್ಮೆ..
ಕಹಿಬೆವರಲಿ ಸಿಹಿಯನುಣಿಸಿ
ಬಿರುಬಿಸಿಲಲಿ ತಂಪಿನಿಂಪೆರೆದು
ಜೀವಜಂತುಗಳಿಗೆ ಒಡಲ ಸವೆಸಿ
ಅರಸಿ ಬಂದವರ ಕೈಹಿಡಿದು, ಮಾತೃವಾತ್ಸಲ್ಯವನೆರೆಯುತ....
ಬೋಳು-ಬೋಳಾದರೂ
ಮತ್ತೆ ಮತ್ತೆ ಚಿಗಿತು..
ಕತ್ತರಿಸಿದರೂ ಸತ್ತು ಸುತ್ತ ಚಿಗುರೊಡೆದು..
ನಾಲ್ಕಂಗುಲವೇ ಸಗ್ಗವೆಂದರಿದು
ಅನುಗಾಲ ದೃಢವಾಗಿ ನಿಂತಿಲ್ಲವೇ....?
ನಿಮ್ಮೊಲವ ಬಯಸಿ..ಬಯಸಿ..
ಪಿಸುಮಾತನೊಮ್ಮೆ ಆಲಿಸು ಬಾ
ನನ್ನೊಳ ಕೊಳವನೊಮ್ಮೆ
ಕೆಲ ರಸನಿಮಿಷಗಳಾದರೂ ಸ್ನೇಹರಾಗದಲಿ ಇಣುಕು ಬಾ..
ಚಿಂತೆ ಸಂತೆಯಿಂದ ಪಾರಾಗಿ
ಕಂತೆ ಭ್ರಾಂತಿಯಿಂದ ಕಣ್ದೆರೆದು
ದೇಹಸಂಬಂಧಗಳ ಮರೆತು
ಆತ್ಮಸಾಂಗತ್ಯದಲಿ ಬೆರೆತು
ಮನದ ಬೇಗುಧಿಗೆ ತಂಪೆರೆದು
ಪ್ರಕೃತಿಯೊಲವಿಗೆ ಮನದೆರೆದು
ಒಂದು ಕ್ಷಣ ಕಿವಿಯಾಗು ಬಾ..
ಒಂದು ಕ್ಷಣ ಕವಿಯಾಗು ಬಾ..
ಸುಳಿವ ತಂಗಾಳಿಯಲಿ ಮಿಂದು
ಪಕ್ಕಿಗಳ ಇಂಚರವನುಂಡು
ಶಯನಮಂಚದೊಳು ಓಲಾಡುವ ಶಶಿಗೊಂದಿಸಿ
ಬಾಲರವಿಯ ಅಂಬೆಗಾಲಾಟವ
ಕಣ್ತುಂಬಿಕೊಂಡು
ನಿಸರ್ಗದ ಚೆಲುವಿನೊಡನಾಟದಿ
ಸಂತಸದಿ ವಿರಮಿಸು ಬಾ..
ಸಂಭ್ರಮದಿ ಪವಡಿಸು ಬಾ..
ಸಂಸಾರ ಬಂಧದಲಿ ಸಿಲುಕಿ
ಕಛೇರಿ ನಿಯಮಗಳಲಿ ಅಳುಕಿ
ಯಂತ್ರದವಸರದಲಿ ಉಸಿರಾಡಿ
ಮಹಲು-ಗೋಪುರಕೆ ತಲೆಬಾಗಿ
ಮದುವೆ-ಮುಂಜಿ, ಯಾತ್ರೆ-ಜಾತ್ರೆ ಗಳಲಿ ಮುಳುಗಿ
ರೋಗ-ಭೋಗಕೂಪದಿ ನರಳಿ
ಸಾಲ-ಶೂಲದ ಭವ್ಯಮಂಚದಿ
ಕಣ್ದೆರೆದು ಮಲಗುತಿರುವ..
ಮನುಜನೇ... ಬಾ ಇಲ್ಲಿ
ಒಂದು ಕ್ಷಣ... ಮರವಾಗು
ಒಂದು ಕ್ಷಣ... ಚಿಗುರಾಗು.
ಮನದ ಕತ್ತಲೆಗೆ ದೀಪವಿಟ್ಟು
ಆಶೆಯಂಬರಕೆ ಕೊಕ್ಕೆ ಹಾಕಿ
ಭಾವೀ ಬದುಕಿಗೆ ಬೀಗ ಜಡಿದು
ವರ್ತಮಾನಕೆ ಕಣ್ಮನದೆರೆದು
ನೀನು... ನೀನಾಗಿ
ನೀನು... ನಾನಾಗಿ
ಗಳಿಗೆ-ಗಳಿಗೆಯಾನಂದವ
ಉತ್ಸಾಹದಿ ಸಂಗಮಿಸಿ
ಉಲ್ಲಾಸದಿ ಸಂಭ್ರಮಿಸಿ
ಒಮ್ಮೆ ತಂಗಾಳಿಯಾಗು...
ಒಮ್ಮೆ ಬೆಳದಿಂಗಳಾಗು.....
ಪ್ರೊ. ಎಂ.ಡಿ. ಚಿತ್ತರಗಿ.
ಕನ್ನಡ ಪ್ರಾಧ್ಯಾಪಕರು.
ಹುನಗುಂದ.
9686019177