ಸಾವಿನಂಚಿನ ಗೆರೆ
*ಸಾವಿನಂಚಿನ ಗೆರೆ*
ಇದ್ದಕ್ಕಿದ್ದಂತೆ ಹೊಳೆಯಿತವನಿಗೆ
ಬದುಕು ನಶ್ವರವೆಂದು!
ದೀರ್ಘಮೌನಿಯಾದ!
ಸಾವಿನ ಗೆರೆ ದಾಟಲು.
ತಾನು ಇಂದೋ ನಾಳೆಯೋ
ಶಿವನ ಆಲಯಯನ್ನು, ಶವದ ಮನೆಯನ್ನು
ಸೇರಬಹುದೆನಿಸಿತು...
ಬಂಧು-ಬಳಗಕ್ಕಿಲ್ಲ ಚಿಂತೆ!
ಭಯದ ಗೆರೆಗಳಂತೂ
ಇಲ್ಲವೇ ಇಲ್ಲ.
ಲೋಕಕ್ಕಂತೂ....?
ಬೇಸರಿಸಿತು ಮನ
ಸಿದ್ದಗೊಂಡಿತು ತನು
ಹದಗೊಂಡ ದೇಹಾತ್ಮಗಳು
ಸನ್ನದ್ದಗೊಂಡವು
ಸಾವಿನ ಕದ ತೆರೆಯಲು..
ಯೋಗ-ಧ್ಯಾನದಿ
ವದನ ಪ್ರಸನ್ನಗೊಳಿಸಿ
ಕ್ರಾಪು ತೆಗೆದು, ಸೇವ್ ಮಾಡಿ
ಆಭ್ಯಂಜನಕಿಳಿದ,
ನಗುಮೊಗದಿ ಮೆರವಣಿಗೆ ಹೊರಟ, ಗರಿಗರಿ ಶ್ವೇತವಸ್ತ್ರದೊಳು.
ಊರೆಲ್ಲ ಸುತ್ತಾಡಿ, ಎಲ್ಲರ
ನಾಲಿಗೆಯೊಳು ಒಂದಾಗಿ,
ಸ್ನೇಹಿತರು, ಬಂಧುಬಳಗಕೆಲ್ಲ
ಸಿಹಿಮಾತನುಣಿಸಿ,
ಶುಕ-ಪಿಕಗಳ ಧ್ವನಿಗೂ
ಕಿವಿಯಾಗಿ, ಕವಿಯಾದ.
ಒಳಗಿನ ಭಯವನು
ಅದಮಿಟ್ಟುಕೊಂಡು,
ಕೊನೆಯ ಭೆಟ್ಟಿಯಲಿ
ಸಂಭ್ರಮಿಸಿ, ತೋರಿಕೆಯ ಖುಷಿಯಲಿ
ನಕ್ಕು-ನಲಿದು,
ಎಲ್ಲರೊಳಗೊಂದಾದ.
ಬದಲಾದ ನಡೆನುಡಿಗೆ
ಊರೆಲ್ಲ ಫಿದಾ!
ಮನೆಯ ಒಳಗೋಡೆಗಳಿಗೂ
ಅಚ್ಚರಿ!
ಆ ರಾತ್ರಿ! ಮಾತು! ಭೋಜನ!
ಸಂಭ್ರಮದ ಹೊನಲು!
ಎಲ್ಲರ ಬಿಗಿದಪ್ಪಿ,
ಕರುಳಕುಡಿಗಳ ಮುದ್ದಿಸಿ
ಬೀಳ್ಕೊಟ್ಟು, ಶಯನಗೃಹ ಹೊಕ್ಕ; ಒಲ್ಲದ ಮನಸಲಿ.
ಭಯಾತಂಕ ಬದಿಗೊತ್ತಿ,
ಕಣ್ಣೀರು ಬತ್ತಿಸಿ
ಚಿತ್ತಾತ್ಮಶುದ್ದಿಯೊಳು
ಸಾವಿನ ಮನೆಯ ಕದತಟ್ಟಿ,
ನಗುಮೊಗದಿ ಎದುರಾದ.
ಸಾವು ಬರಲಿಲ್ಲ!
ಇವನು ಬಿಡಲಿಲ್ಲ!.
ದಿನ-ತಿಂಗಳು-ವರ್ಷಗಳೇ
ಬೆನ್ನು ತಿರುಗಿಸಿದವು
ಇವನ ಮನದೊಡಲಿನ
ಮೆರವಣಿಗೆ ಸಾಗಿತ್ತು
ನಿರಾತಂಕದಲಿ!
ಖುಷಿಯ ಬುಗ್ಗೆ
ಮನೆ-ಮನದಲ್ಲೂ
ನಿತ್ಯ ಅನುರಣಿಸಿತ್ತು.
ಸಾವಿಗೆ ಸಾವಾಗಿತ್ತು.
ಎಂ.ಡಿ.ಚಿತ್ತರಗಿ
ಹುನಗುಂದ
9686019177